ಚೆನ್ನುಡಿ
" ಕಾಲಾಯ ತಸ್ಮೈ ನಮಃ " ಎಂಬುದು ಭರ್ತ್ರ್ ಹರಿ ಕವಿಯ ಉಕ್ತಿ. ಎಲ್ಲ ದೃಷ್ಟಿಗಳಿಂದಲೂ ಅರ್ಥಪೂರ್ಣವಾದದ್ದು. ಕಾಲಾಯ ಎಂಬುದನ್ನ ’ ಕಲಾಯ ’ ಎಂದು ಮಾರ್ಪಡಿಸಿಕೊಂಡರೂ ತಪ್ಪಲ್ಲ. ಕಾಲಕ್ಕೆ ತಕ್ಕಂತೆ ಕಲಾವತಾರಗಳು;
ಕವಿತಾ ಪ್ರಕಾರಗಳು !
ವರ್ತಮಾನ ಕಾಲ ಹನಿಗವನ(ಚುಟುಕು)ಗಳ ಯುಗ. ಒಂದು ಕಡೆ ಮಹಾಕಾವ್ಯಗಳು; ಇನ್ನೊಂದು ಕಡೆ ಅವುಗಳೊಂದಿಗೆ ಸ್ಪರ್ಧಿಸುವಂತೆ ಮಹಾ ’ವಾಕ್ಯ’, ಅರ್ಥಾತ್ ಚುಟುಕುಗಳಣ ಇಂಥ ಪದ್ಯದಪರಿಧಿಯೊಳಕ್ಕೆ ಲೇಖಕರ ಪ್ರಶಸ್ತ ಪ್ರವೇಶ !
ಚಕ್ರವ್ಯೂಹವ?? ಹೊಕ್ಕಿದ್ದಾರೆ, ಈ ಅಭಿಮನ್ಯು; ಅಷ್ಟು ಮೋಹಕವಾದದ್ದು, ಮಾರಕವಾದುದಲ್ಲ,ಬಿಂದು ಪದ್ಯ ಪ್ರಪಂಚ.
ಈ ಕವಿ ತಮ್ಮನ್ನು "ಅನಾಮಿಕ" ಎಂದು ವಿನಯಪೂರ್ವಕ ಕರೆದುಕೊಂಡಿದ್ದಾರೆ. ಅನಾಮಿಕ ಅಲ್ಲ, ಅನೇಕ ಮುಖ, ಅನನ್ಯಮುಖ ಎನ್ನಬಹುದು ! ಬದುಕಿನ ವೈಚಿತ್ರ್ಯ, ವೈವಿಧ್ಯಗಳು, ತಿರುವು, ಮುರುವು ಮರ್ಮಗಳು, ಪತ್ಯ, ಮಿಥ್ಯ, ಮಾಯೆಗಳು, ಸಿಹಿಕಹಿಗಳು, ಪ್ರಕೃತಿ ವಿಕೃತಿಗಳು ಇಲ್ಲಿನ ’ಹನಿ-ಕುಡಿ ಕವನ’ ಗಳಲ್ಲಿ ಪ್ರತಿಫಲಿತವಾಗಿವೆ. ಗಾಂಭೀರ್ಯ, ಹಾಸ್ಯ, ವಿಡಂಬನೆ, ಚಮತ್ಕಾರಗಳ
ಚದುರಂಗದಾಟವನ್ನು ಇಲ್ಲಿ ಕಂಡು ವಿ’ಸ್ಮಿತ’ರಾಗುತ್ತೇವೆ !
ದಿಟ, ಕೆಲವು ರಚನೆಗಳು ಪ್ರಾಸಗಳ ಹಾಸಿಗೆ ಬಲಿಯಾಗಿವೆ; ಆದರೆ ಬಹುತೇಕ ಮುಕ್ತಕಗಳು ಪ್ರಾಸ ’ಮುಕ್ತ’ವಾಗಿ ಉತ್ತಮಿಕೆಯ ಕಡೆಗೆ ಹಸ್ತಚಾಚಿವೆ ಎಂಬುದನ್ನು ಒಪ್ಪಬೇಕು !
ಒಟ್ಟಿನ ಮೇಲೆ ಇಲ್ಲುಂಟು ಆಸ್ವಾದ್ಯವಾದ, ಯಾವುದೂ ಅಸಾಧ್ಯವೆನಿಸದ ಕವನ ಪರಂಪರೆ. ಸಾಮಾನ್ಯವಾದ, ಅಂತೆಯೆ ಮಾನ್ಯ ರೋಚಕವಾದ ಹನಿಗಳು ಇಲ್ಲಿ ಮನೆ ಮಾಡಿವೆ. ಮತ್ತೊಂದು ಗಮನಾರ್ಹ ಅಂಶ; ಇಲ್ಲಿ ಸಮಕಾಲೀನತೆಯಿದೆ; ಅದಕ್ಕನುಗುಣವಾಗಿ ಭಾಷೆಯ ಮೇಲೆ ಹಿಡಿತವಿದೆ.
ಹಿಂದು ಇಂದುಗಳನ್ನು ಧ್ವನಿಸುವ ಒಂದೇ ಒಂದು ಪದ್ಯವನ್ನು ಉದ್ದರಿಸಿ ಮುಗಿಸಬಹುದು :
ಸತ್ಯ, ಅಹಿಂಸೆ, ಧರ್ಮ
ಹಿಂದಿನವರ ಗಳಿಕೆ
ಇಂದಿಗೆ ಅವೆಲ್ಲ
ಕೇವಲ ಪಳೆಯುಳಿಕೆ !
ಪೂರ್ತಿ ’ ಪಳೆಯುಳಿಕೆ ’ ಯಲ್ಲದ, ಫಳಫಳಿಸುವ ಕವನಸರಣಿಯನ್ನು ಕೊಟ್ಟಿರುವ ಕವಿಗೆ ಅಭಿನಂದನೆಗಳು. ಈ ಪ್ರಗತಿಪರತೆ , ಫಸಲು ಹೆಚ್ಚಲಿ ; ಸಹೃದಯ ರಸಿಕರಿಗೆ ಮೆಚ್ಚಾಗಲಿ !
ಡಾ || ಸಿ.ಪಿ.ಕೆ.
೨೩-೦೪-೨೩